ಇದೇ ದಿನಾಂಕ 14 ರಂದು ಭಾನುವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ” ಕಾವೇರಿ ನದಿ ನೀರಿನ” ಕುರಿತು, ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆದಿದೆ.
ಈ ಸಭೆಗೆ ರಾಜ್ಯದ ಸರ್ವಪಕ್ಷಗಳ ಸದಸ್ಯರು, ಕೇಂದ್ರ ಸಚಿವರು, ಸಂಸತ್ ಸದಸ್ಯರು, ಕಾವೇರಿ ಜಲಾನಯನ ಪ್ರದೇಶದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಹಾಜರಾಗಿ ಕಾವೇರಿ ನೀರು ಹಂಚಿಕೆಯಲ್ಲಿ ಉದ್ಭವವಾಗಿರುವ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಸಲಹೆ ನೀಡಬೇಕೆಂದು ಮುಖ್ಯಮಂತ್ರಿಗಳು ಕೋರಿದ್ದಾರೆ.
ಕರುನಾಡ ಜೀವನದಿ ಕಾವೇರಿಯ ರಕ್ಷಣೆಗಾಗಿ, ನಾಡಿನ ರೈತರ ಹಿತ ಕಾಯುವುದಕ್ಕಾಗಿ ನಿಮ್ಮೆಲ್ಲರ ಸಹಕಾರವಿರಲಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಮಹಾದಾಯಿಗೆ ಮತ್ತೆ ಮಲತಾಯಿ ಧೋರಣೆ
ಸರ್ಕಾರ ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ತಲೆಕೆಡಿಸಿಕೊಂಡಷ್ಟು ಮಹಾದಾಯಿ ಯೋಜನೆ ಅನುಷ್ಟಾನಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಅನ್ನೋದು ಈ ಭಾಗದಲ್ಲಿ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾವೇರಿ ಜಲಾನಯನ ಪ್ರದೇಶದ ರಾಜಕಾರಣಿಗಳು, ಕಾವೇರಿಗಾಗಿ ತೋರುವ ಆಸಕ್ತಿ, ಇಚ್ಚಾಶಕ್ತಿ, ಒಗ್ಗಟ್ಟು, ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಇಲ್ಲದೆ ಇರುವದು ದಶಕಗಳ ಹೋರಾಟಕ್ಕೆ ಹಿನ್ನೆಡೆಯಾಗುತ್ತ ಬಂದಿದೆ.
ಚುನಾವಣೆ ಬಂದಾಗ ಮಹಾದಾಯಿ ಬಗ್ಗೆ ಮಾತನಾಡಿ ಮತ ಪಡೆಯುವ ರಾಜಕಾರಣಿಗಳು, ಶಾಸಕ, ಸಂಸದರಾಗಿ ಆಯ್ಕೆಯಾದ ನಂತರ ಮಹಾದಾಯಿ ದಿಕ್ಕಿನ ಕಡೆ ನೋಡದೆ ಇರುವದು ಆಕ್ರೋಶಕ್ಕೆ ಕಾರಣವಾಗಿದೆ.
