ಕರ್ನಾಟಕದ ಮೊದಲ ಅವೈಜ್ಞಾನಿಕ BRTS ಯೋಜನೆ ಬಗ್ಗೆ ಜನರಲ್ಲಿ ಆಕ್ರೋಶ ಮನೆ ಮಾಡಿದೆ. BRTS ರಸ್ತೆಯಿಂದ ಮುಕ್ತಿ ಪಡೆಯಲು ಧಾರವಾಡ ದ್ವನಿ ಎಂಬ ಸಂಘಟನೆ ಆಸ್ತಿತ್ವಕ್ಕೆ ಬಂದಿದೆ.
BRTS ರಸ್ತೆಯಲ್ಲಿ ಇನ್ನಿತರೇ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ, ಧಾರವಾಡ ದ್ವನಿ ಸಂಘಟನೆ, ಸೋಮವಾರ ನವಲೂರಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಧಾರವಾಡ ಜ್ಯುಬಿಲಿ ಸರ್ಕಲ್ದಿಂದ ನವಲೂರು ವರೆಗೆ, ಹಾಗೂ ಹುಬ್ಬಳ್ಳಿಯ ಉಣಕಲ್ ಕೆರೆಯಿಂದ ರಾಣಿ ಚನ್ನಮ್ಮ ಸರ್ಕಲ್ವರೆಗೆ, ಮಿನಿ ವಾಹನಗಳಿಗೆ (ಕಾರು, ಬೈಕ್, ಆಟೋರಿಕ್ಷಾ ಇತರೆ) BRTS ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಧಾರವಾಡ ನಗರದ ಲಕ್ಷ್ಮೀ ಟಾಕೀಜ್ ಬಳಿ ಹಾಕಿರುವ ಬ್ಯಾರಿಕೇಡ್ ತೆಗೆದು, ತಹಶೀಲ್ದಾರ್ ಕಛೇರಿ ಕಡೆಯಿಂದ ಸಂಗಮ ಥಿಯೇಟರ್ ಸರ್ಕಲ್ ಮೂಲಕ ಟಿಕಾರೆ ರೋಡ್ ನತ್ತ ವಾಹನಗಳು ತೆರಳಲು ಅನುಕೂಲ ಮಾಡಬೇಕು ಎಂಬ ಬೇಡಿಕೆ ಇಡಲಾಗುತ್ತಿದೆ
ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ಲೈಟ್ ಸರಿಪಡಿಸಿ, ವಾಹನಗಳು & ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಆಗಬೇಕು. ಯಾಲಕ್ಕಿ ಶೆಟ್ಟರ್ ಕಾಲೋನಿಯ ಎದುರಿನ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕು.
ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿನ ಬ್ಯಾರಿಕೇಡ್ ತೆಗೆದು ಸಾರ್ವಜನಿಕರ ವಾಹನಗಳಿಗೆ ಅವಕಾಶ ಒದಗಿಸಬೇಕು. ಸಾರ್ವಜನಿಕರ ವಾಹನಗಳು ಸಂಚರಿಸುವ ಎರಡೂ ಬದಿಯ ರಸ್ತೆಯಲ್ಲಿನ ಮನೆ, ವಾಣಿಜ್ಯ ಮಳಿಗೆ ಇನ್ನಿತರ ಸ್ಥಳಗಳ ಬಳಿ ವಾಹನಗಳ ನಿಲುಗಡೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಬೇಕು ಎಂದು ಈಶ್ವರ ಶಿವಳ್ಳಿ ಆಗ್ರಹಿಸಿದ್ದಾರೆ.
ಸುಮಾರು ಶೇ.95 ರಷ್ಟು ಸಮಯ ಬಿ.ಆರ್.ಟಿ.ಎಸ್ ರಸ್ತೆಗಳು ಖಾಲಿಯಾಗಿದ್ದರೆ, ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗಿ ಸಾವು ನೋವು ಸಂಭವಿಸುತ್ತಿವೆ. ಒಟ್ಟಾರೆಯಾಗಿ ಎಚ್.ಡಿ.ಬಿ.ಆರ್.ಟಿ.ಎಸ್. ವ್ಯವಸ್ಥೆಯಲ್ಲಿನ ಲೋಪಗಳನ್ನು ಶೀಘ್ರವೇ ಸುಧಾರಿಸಿ, ಈ ಗಂಭೀರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಧಾರವಾಡ ದ್ವನಿ ಆಗ್ರಹಿಸಿದೆ.
ಇವೆಲ್ಲ ಬೇಡಿಕೆಗೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ 10-30 ಕ್ಕೆ ನವಲೂರಿನಿಂದ ಪ್ರತಿಭಟನಾ ಪಾದಯಾತ್ರೆ ಆರಂಭವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ.
