ಧಾರವಾಡ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಿವಲೀಲಾ ಕುಲಕರ್ಣಿ ಅವರು ಪರಾಭವಗೊಂಡ ನಂತರ ಕೆಲವರು ಶಾಸಕ ವಿನಯ್ ಕುಲಕರ್ಣಿ ಅವರ ಧಾರವಾಡ ನಿವಾಸದ ಮುಂದೆ ಪಟಾಕಿ ಸಿಡಿಸಿದ ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಲೇರಿದೆ.
ರಾಜ್ಯ ಸರ್ಕಾರ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕೆಎಂಎಫ್‌ಗೆ ನಾಮನಿರ್ದೇಶನ ಮಾಡಿದ ನಂತರ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿಯ ಶಂಕರ ಮುಗದ ಅವರ ವಿರುದ್ಧ ಶಿವಲೀಲಾ ಪರಾಭವಗೊಂಡ ಕಾರಣಕ್ಕೆ ಅವರ ಮನೆ ಎದುರು ಪಟಾಕಿ ಸಿಡಿಸಿದ್ದರು ಎನ್ನಲಾಗಿದೆ.
ಧಾರವಾಡ ಉಪನಗರ ಠಾಣೆ ಪೊಲೀಸರು ಇಂದು ಬೆಳಿಗ್ಗೆ ಪಟಾಕಿ ಸಿಡಿಸಿದ ರಾಜೇಸಾಬ್ ಅಲ್ಗೂರ್ ಎಂಬಾತನನ್ನು ಠಾಣೆಗೆ ಕರೆತಂದು ಆತನನ್ನು ವಿಚಾರಣೆಗೊಳಪಡಿಸುತ್ತಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಠಾಣೆ ಮುಂದೆ ಜಮಾಯಿಸಿದರು. ರಾಜೇಸಾಬ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪಟಾಕಿ ಸಿಡಿಸಿದ್ದಕ್ಕೆ ಮಾತ್ರ ಈ ರೀತಿ ಭಯೋತ್ಪಾದಕನನ್ನು ಕರೆದುಕೊಂಡು ಬರುವ ರೀತಿಯಲ್ಲಿ ರಾಜೇಸಾಬ್‌ನನ್ನು ಪೊಲೀಸರು ಬೆಳ್ಳಂಬೆಳಿಗ್ಗೆ ಕರೆದುಕೊಂಡು ಬಂದಿದ್ದಾರೆ ಎಂದು ಇಸ್ಮಾಯಿಲ್ ಆರೋಪಿಸಿದರು.
ಪಟಾಕಿ ಹೊಡೆದಿದ್ದಕ್ಕೆ ಮಾತ್ರ ಈ ರೀತಿ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವುದಾದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರೆಲ್ಲ ಸೇರಿ ಓಪನ್ ಆಗಿಯೇ ಪಟಾಕಿ ಹೊಡೆಯುತ್ತೇವೆ ಆಗ ಎಷ್ಟು ಜನರನ್ನು ಪೊಲೀಸರು ಬಂಧಿಸುತ್ತಾರೋ ನೋಡೋಣ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸವಾಲು ಹಾಕಿದರು.