ಧಾರವಾಡದ ಸರ್ಕಾರಿ ಕಚೇರಿಯೊಂದರಲ್ಲಿ ಜಾತಿ ಆಧಾರದ ಮೇಲೆ ಮೇಲಾಧಿಕಾರಿಗಳನ್ನು ನಿಂದಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಜಾತಿ ನಿಂದನೆ ಮಾಡಿರುವ ನೌಕರನ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕ ಆಗ್ರಹಿಸಿದೆ.
ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯಶ್ರೀ ಹೆಂಡಗಾರ ದಲಿತ ಅಧಿಕಾರಿಯಾಗಿದ್ದು, ಅದೇ ಇಲಾಖೆಯಲ್ಲಿರುವ
ಸಿಬ್ಬಂದಿ ಗಂಗಾಧರ ಕತ್ತಿ ಎಂಬುವವರು, ಜಾತಿ ಆಧಾರದ ಮೇಲೆ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೇಲಾಧಿಕಾರಿಗಳು ದಲಿತರಿದ್ದಾರೆ ಅನ್ನೋ ಕಾರಣಕ್ಕೆ ಕತ್ತಿ ಎಂಬುವವರಿಗೆ, ಅವರ ಕೈಕೆಳಗೆ ಕೆಲಸ ಮಾಡಲು ಮನಸ್ಸಿಲ್ಲವಂತೆ.
ಮೇಲಾಧಿಕಾರಿಗಳು ದಲಿತರು ಅನ್ನೋ ಕಾರಣಕ್ಕೆ, ಜಾತಿ ನಿಂದನೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದ್ದು,
ಕೂಡಲೇ ಸದರಿ ಸಿಬ್ಬಂದಿಯ ಮೇಲೆ ಜಾತಿ ದೌರ್ಜನ್ಯದ ಕಾಯ್ದೆಯ ಪ್ರಕಾರ ಕ್ರಮ ಜರುಗಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಗಂಗಾಧರ ಕತ್ತಿ ಎಂಬುವವರ ಮೇಲೆ ಇಲಾಖಾ ವಿಚಾರಣೆಯನ್ನು ಕೂಡಲೇ ಆರಂಭಿಸಬೇಕು, ಇಲ್ಲವಾದರೆ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷೆ ವೀಣಾ ಹೊಸಮನಿ ಎಚ್ಚರಿಸಿದ್ದಾರೆ.
ನಡೆದಿರುವ ಘಟನೆಯನ್ನು ಖಂಡಿಸಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೀಣಾ ಹೊಸಮನಿ ಮನವಿ ಪತ್ರ ನೀಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ವೈ. ಪ್ರಶಾಂತ, ಕಾರ್ಯಾಧ್ಯಕ್ಷ ಡಾ.ಆರ್.ವೈ. ಬೂದಿಹಾಳ, ಪ್ರವೀಣಕುಮಾರ ಪೂಜಾರ, ಅನೀಲ ನಿಪ್ಪಾಣಿಕರ, ಜಿತೇಂದ್ರ ಹೊಸಮನಿ, ನವೀನಕುಮಾರ ನಾಗರಾಳ, ರವಿಕುಮಾರ ಸೇರಿದಂತೆ ಹಲವರು, ಕತ್ತಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.