ಹುಬ್ಬಳ್ಳಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಹಳೇ ಹುಬ್ಬಳ್ಳಿ ಪೊಲೀಸರಿಂದ ಬಂಧಿತನಾಗಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿ ಭಾರತದವನೇ ಅಲ್ಲ ಎಂಬುದು ಇದೀಗ ಬಯಲಾಗಿದೆ.
ಈತ ಮೂಲತ ನೇಪಾಳದವನು ಎನ್ನಲಾಗಿದ್ದು, ಈತನಿಗೆ ಅಲ್ಲಿ ಶೇರ್ ಎ ನೇಪಾಳ ಎಂದು ಕರೆಯಲಾಗುತ್ತಿತ್ತು ಎಂದು ಗೊತ್ತಾಗಿದೆ. ಕಳೆದ 6 ವರ್ಷಗಳ ಹಿಂದೆ ಮಧ್ಯಪ್ರದೇಶದ ಖಂಡವಾ ಎಂಬ ಪಟ್ಟಣಕ್ಕೆ ಬಂದು ನೆಲೆಸಿದ್ದ ಈತ, ಅಲ್ಲಿಯೇ ಮದರಸಾ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಈತನಿಗೆ ಈಗಾಗಲೇ ಎರಡು ಮದುವೆಗಳಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮೊದಲನೇ ಪತ್ನಿ ನೇಪಾಳದವಳು ಎನ್ನಲಾಗಿದೆ. ಮೊದಲ ಪತ್ನಿಗೆ ವಿಚ್ಚೆದನ ನೀಡಿ ಬಳಿಕ ಈತ ನೇಪಾಳದಿಂದ ಭಾರತಕ್ಕೆ ಬಂದು ನೆಲೆಸಿದ್ದ ಎನ್ನಲಾಗಿದೆ. ನೇಪಾಳ ಪೌರತ್ವ ಹೊಂದಿರುವ ಈತ, ಖಂಡವಾಗೆ ಬಂದು ನೆಲೆಸಿದ ಮೇಲೆ ಆಧಾರ ಕಾರ್ಡ, ಪ್ಯಾನ ಕಾರ್ಡ, ಹಾಗೂ ಮತದಾರರ ಚೀಟಿ ಹೊಂದಿದ್ದಾನೆ. ನೇಪಾಳದಲ್ಲಿ ಈತನ ಕುಟುಂಬವಿದ್ದು, ಅಲ್ಲಿಗೆ ಆಗಾಗ ಹೋಗಿ ಬರುತ್ತಿದ್ದ ಎಂದು ಹೇಳಲಾಗಿದೆ. ಈತನ ಭಾರತೀಯ ಪೌರತ್ವದ ಬಗ್ಗೆಯೂ ತನಿಖೆಯಾಗಬೇಕಾಗಿದೆ.
ಭಾರತದ ಅನೇಕ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಗುಲಾಮ ಜಿಲಾನಿ ಅಜಹರಿ, ಧಾರ್ಮಿಕ ಪ್ರವಚನ ನೀಡಿ ಜನಮನ್ನಣೆ ಗಳಿಸಿದ್ದ, ಮತ್ತು ಭಾರತದ ಹೆಸರಾಂತ ಧಾರ್ಮಿಕ ಪ್ರವಚನಕಾರರ ವಿರುದ್ಧ ಹೇಳಿಕೆ ಕೊಡುತ್ತಿದ್ದ ಎನ್ನಲಾಗಿದೆ.
ನೇಪಾಳದವನಾದ ಗುಲಾಮ ಜಿಲಾನಿ, ಭಾರತದೊಳಗೆ ನುಸುಳಿ ಇಂತಹ ಕೃತ್ಯ ಮಾಡಿದ್ದು, ಭಾರತದ ಮೌಲ್ವಿಗಳು ಈತನ ಕೃತ್ಯವನ್ನು ಖಂಡಿಸಿದ್ದಾರೆ.
