ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿದ್ದ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಬಣಗಳು ಸೃಷ್ಟಿಯಾಗಿವೆ.
ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಹೋರಾಟ ಒಂದು ಪಕ್ಷಕ್ಕೆ ಮತ್ತು ಒಬ್ಬ ವ್ಯಕ್ತಿಯನ್ನು ಬೆಳೆಸಲು ನಡೆಯುವ ಹೋರಾಟವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು ನಾಳಿನ ಪಂಚಮಸಾಲಿ ಹೋರಾಟದಲ್ಲಿ ನಾವು ಬಾಗವಹಿಸುವದಿಲ್ಲ ಎಂದು ವಿಜಯಾನಂದ ಕಾಶಪ್ಪನವರ ಸ್ಪಷ್ಟಪಡಿಸಿದ್ದಾರೆ.
ಪಂಚಮಸಾಲಿ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ನಾಳೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಿದ್ದು, ಮೀಸಲಾತಿ ಹೋರಾಟದಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ.
ವಿಜಯಪೂರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಳಿನ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟರೆ, ವಿಜಯಾನಂದ ಕಾಶಪ್ಪನವರ ಹೋರಾಟದಲ್ಲಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ.
ಮೀಸಲಾತಿಗಾಗಿ ಪಕ್ಷಾತೀತ ಹೋರಾಟ ನಡೆಯುವ ಬದಲು, ನಾಳಿನ ಹೋರಾಟ ಒಂದು ಪಕ್ಷಕ್ಕೆ ಸೀಮಿತವಾಗಿದೆ ಎಂದು ವಿಜಯಾನಂದ ಕಾಶಪ್ಪನವರ ಕಿಡಿ ಕಾರಿದ್ದಾರೆ.